© ಕಹಳೆ

ನಮ್ಮ ಬಗ್ಗೆ 

ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ ಎನ್ನುವ ಜನರನ್ನು ಸೇರಿಸಿ , ಕನ್ನಡ ಸಾಹಿತ್ಯ ಸಾಗರಕ್ಕೆ ಒಂದು ಹನಿಯನ್ನು ಸೇರಿಸೋಣ ಎಂಬ ಕನಸು “ಕಹಳೆ” ಯದು. ನಮ್ಮ ನಡುವೆಯೇ ಎಷ್ಟೋ ಜನ ಕಥೆ ಬರೆಯುವವರಿದ್ದಾರೆ. ಒಂದು ಹುಡುಗಿಯನ್ನೋ , ಸುರಿವ ಮಳೆಯನ್ನೋ ನೋಡಿ ತಲ್ಲೀನರಾಗಿ ಕವನ ಗೀಚುವವರಿದ್ದಾರೆ. ಎಲ್ಲರನ್ನೂ ಕಹಳೆಯ ನಾದದೊಂದಿಗೆ ಕರೆ ನೀಡಿ ಸಾಹಿತ್ಯ ಕ್ಷೇತ್ರದಲ್ಲಿ ಅಳಿಲುಸೇವೆ ಸಲ್ಲಿಸ ಬೇಕೆನ್ನುವುದು ಕಹಳೆಯ ಹೆಬ್ಬಯಕೆ. ಎಷ್ಟೋ ಕಣ್ಣೆದುರು ಕಂಡ ಘಟನೆಗಳು , ಇರುಳು ಕಾಡಿದ ಕನಸು, ಸ್ವಪ್ನಲೋಕದಲ್ಲಿ ಕಂಡ ಪ್ರೇಮಲೋಕ, ಮೊರೆವ ಕಡಲ ತರದ ವಿರಹ , ನಿಸರ್ಗ ಒಂದೇ ಎರಡೇ. ಮನದಲ್ಲಿ ಮೂಡುವ ವಿಚಾರಧಾರೆಗಳಿಗೆ ಲೆಕ್ಕವಿಲ್ಲ. ಎಲ್ಲ ಭಾವನೆಗಳನ್ನು ಅಕ್ಷರದಲ್ಲಿ ಹಿಡಿದಿಡಲು ನಮ್ಮ ನಡುವಿನ ಕಥಾಗಾರರಿಗೆ ಕವಿಗಳಿಗೆ ಒಂದು ಪ್ರೋತ್ಸಾಹ ಬೇಕು. ಪ್ರೋತ್ಸಾಹವೊಂದಿದ್ದಾರೆ ಸಾಕು ಮಸ್ತಕದ ಅಕ್ಷರಗಳು ಕಾಗದದಲ್ಲಿ ಅಚ್ಚಾಗುತ್ತವೆ. ಈ ನಿಟ್ಟಿನಲ್ಲಿ ನಿರಂತರವಾಗಿ ಕಥಾ ಸ್ಪರ್ಧೆ, ಕವಿತೆ ರಚನೆ ಸ್ಪರ್ಧೆ ಕನ್ನಡ ಸಾಹಿತ್ಯದ ವಿವಿಧ ಮಜಲುಗಳ ಕುರಿತಾದ ಹತ್ತು ಹಲವು ಸ್ಪರ್ಧೆಗಳನ್ನು ನಡೆಸುತ್ತಾ ಹೊಸದಾಗಿ ಮೂಡಿ ಬರುತ್ತಿರುವ ಕವಿಗಳನ್ನು , ಕಥಾಗಾರರನ್ನು ಪ್ರೋತ್ಸಾಹಿಸಿ ಅವರಿಗೊಂದು ವೇದಿಕೆ ಕಲ್ಪಿಸಿ ಕೊಡುವುದು ಕಹಳೆ ಯ ಮುಖ್ಯ ಉದ್ದೇಶಗಳಲ್ಲೊಂದು.

ಕವನಗಳನ್ನು ಬರೆದವರ ಭಾವದೊಂದಿಗೆ ಕೇಳಿದರೆ ಅದಕ್ಕೊಂದು ಸಂಪೂರ್ಣ ಕಳೆ. ಅದಕ್ಕನುಕೂಲವಾಗುವಂತೆ ಕಹಳೆ ಯ ವತಿಯಿಂದ ಕವನ ವಾಚನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ . ಬರೆದ ಕೃತಿಗಳಲ್ಲಿ ಕೆಲವು ಮಾತ್ರ ಬೆಳಕಿಗೆ ಬರುತ್ತವೆ. ಹೆಚ್ಚಿನ ಪಾಲು ಕೃತಿಗಳು ಶಾಯಿಯ ಮೇಲೆ ನೀರು ಹರಿದು ಅಕ್ಷರಗಳು ಅಸ್ಪಷ್ಟವಾಗಿ , ಮರೆಯಾಗುತ್ತವೆ. ಇಂದಿಗೂ ಬರಹಗಾರರು ಮತ್ತು ಪ್ರಕಾಶಕರ ನಡುವೆ ಇರುವ ಅಂತರವೇ ಇದಕ್ಕೆ ಕಾರಣ. ಹೊಸ ಕೃತಿಗಳು ಸೇರ್ಪಡೆಯಾಗುವುದರಿಂದ ಭಾಷೆಯ ಸೊಬಗು ಹೆಚ್ಚುತ್ತದೆ. ಹಾಗಾಗಿ ಹಲವು ಪ್ರಕಾಶಕರ ಸಹಯೋಗದೊಂದಿಗೆ ಬರೆಯುವ ಲೇಖನಕ್ಕೆ ಶಕ್ತಿ ನೀಡುವ ಗುರಿಯನ್ನು ಕಹಳೆ ಹೊಂದಿದೆ. ” ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ” ಎಂಬ ಮಾತು ಎಂದೆಂದಿಗೂ ಸತ್ಯ. ಮೂಡಿದ ಚಿಗುರು ಹೂವಾಗಿ ಹಣ್ಣಾಗುವುದು ಬೇರು ಹೀರುವ ಪೋಷಕಾಂಶದಿಂದ. ಕನ್ನಡದಲ್ಲಿ ಸಾಧನೆ ಮಾಡಿರುವ ಹಿರಿಯರು , ಸಾಧನೆ ಮಾಡಬೇಕೆನ್ನುವ ತುಡಿತದ ಕಿರಿಯರನ್ನು ಒಂದೆಡೆ ಸೇರಿಸಿ ಹಿರಿ ಕಿರಿಯರ ಸಂಯೋಜನೆಯಲ್ಲಿ ಸೃಜನಾತ್ಮಕ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸುತ್ತಾ ತನ್ಮೂಲಕ ಕನ್ನಡಾಂಬೆಯ ಸೊಗಡನ್ನು ಎಲ್ಲೆಡೆ ಪಸರಿಸಬೇಕೆನ್ನುವ ಮಿಡಿತದ ಕಹಳೆಯಿದು